ದೇವಪ್ಪ ದಳವಾಯಿ ಅವರಿಗೆ ಅದ್ಧೂರಿ ಬಿಳ್ಕೋಡುಗೆ: ಸೇವೆಯನ್ನು ಸ್ಮರಿಸಿದ ಗಣ್ಯರು

ದೇವಪ್ಪ ದಳವಾಯಿ ಅವರಿಗೆ ಅದ್ಧೂರಿ ಬಿಳ್ಕೋಡುಗೆ: ಸೇವೆಯನ್ನು ಸ್ಮರಿಸಿದ ಗಣ್ಯರು

ಹಿರೇಗೊಣ್ಣಾಗರ: ಹಿರೇಗೊಣ್ಣಾಗರ ಗ್ರಾಮದ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ದೀರ್ಘಕಾಲದ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ಶ್ರೀ ದೇವಪ್ಪ ದಳವಾಯಿ ಅವರನ್ನು ಅದ್ಧೂರಿ ಸನ್ಮಾನದೊಂದಿಗೆ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಹಿರಿಯರು, ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ಅವರ ಸೇವೆಯನ್ನು ಗುಣಗಾನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀ ಮೋಹನ್ ಜೋಗಿನ್ ಮಾತನಾಡಿ, “ಶಿಕ್ಷಕ ದೇವಪ್ಪ ದಳವಾಯಿ ಅವರದ್ದು ಕೇವಲ ಒಂದು ವೃತ್ತಿಯಲ್ಲ, ಅದೊಂದು ಪವಿತ್ರ ಸೇವೆ. ಅವರು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ನಿವೃತ್ತಿ ನಮ್ಮ ಶಾಲಾ ಕುಟುಂಬಕ್ಕೆ ಒಂದು ದೊಡ್ಡ ನಷ್ಟ,” ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರೇಗೊಣ್ಣಾಗರ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಮಾಸಮ್ಮ ಮೆಣಸಗೆರಿ ಅವರು ಮಾತನಾಡಿ, “ಒಬ್ಬ ಶಿಕ್ಷಕ ಸಮಾಜದ ಆಧಾರ ಸ್ತಂಭ. ದೇವಪ್ಪ ದಳವಾಯಿ ಅವರ ಶಿಸ್ತುಬದ್ಧ ಬೋಧನೆ ಮತ್ತು ಮಕ್ಕಳ ಮೇಲಿನ ಅವರ ಪ್ರೀತಿ ಎಲ್ಲರಿಗೂ ಮಾದರಿ,” ಎಂದು ಶ್ಲಾಘಿಸಿದರು. ಮತ್ತೊಬ್ಬ ಅತಿಥಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಶ್ರೀಮತಿ ಗೌರಮ್ಮ ಉಣಚಗೇರಿ ಅವರು ದಳವಾಯಿ ಅವರ ಸರಳತೆ ಮತ್ತು ಕರ್ತವ್ಯ ನಿಷ್ಠೆಯನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿದ್ದ ಕುಷ್ಟಗಿಯ ಬಿ.ಆರ್.ಪಿ.ಗಳಾದ ಶ್ರೀಕಾಂತ ಬೆಟಗೇರಿ ಮತ್ತು ಶ್ರೀ ಲೋಕೇಶ್, ಸಿ.ಆರ್.ಪಿ. ಶ್ರೀ ವಸಂತ್ ರಾಜೂರ , ಶ್ರೀ ರಾಮಣ್ಣ ಸಕ್ರಿ ಅವರು ಕೂಡ ದೇವಪ್ಪ ದಳವಾಯಿ ಅವರ ಸೇವಾ ಅವಧಿಯನ್ನು ಪ್ರಶಂಸಿಸಿ ಮಾತನಾಡಿದರು.

ಇದೇ ವೇಳೆ, ಹಳೆಯ ವಿದ್ಯಾರ್ಥಿ ಸಂಘದ ಪರವಾಗಿ ಮತ್ತು ಅವರು ಮಾತನಾಡಿ, “ನಮ್ಮ ಗುರುಗಳು ಕೇವಲ ಪಾಠ ಹೇಳಿಕೊಟ್ಟವರಲ್ಲ, ಜೀವನದ ಮೌಲ್ಯಗಳನ್ನು ಕಲಿಸಿದ ಮಾರ್ಗದರ್ಶಕರು,” ಎಂದು ಕೃತಜ್ಞತೆ ಸಲ್ಲಿಸಿದರು. ಶ್ರೀ ದ್ಯಾಮಣ್ಣ ಕಾಡದ, ಶ್ರೀ ಕಳಕಪ್ಪ ಸೊಬರದ, ಶ್ರೀ ಗೋಪಾಲಕೃಷ್ಣ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರು& ಶ್ರೀ ಲಿಂಗರಾಜ ಗಾಳಿ ಅಧ್ಯಕ್ಷರು ಹಳೆಯ ವಿದ್ಯಾರ್ಥಿಗಳ ಸಂಘ, ಸ.ಪ್ರೌಢ ಶಾಲೆ ಹಿರೇಗೊಣ್ಣಾಗರ ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ದೇವಪ್ಪ ದಳವಾಯಿ ಅವರು, ತಮ್ಮ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿ, ಭಾವನಾತ್ಮಕವಾಗಿ ನುಡಿದರು. ಕೊನೆಯಲ್ಲಿ, ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ವರದಿಗಾರರು, ಶ್ರೀ ಲಿಂಗರಾಜವರ್ಮಾ ಗಾಳಿ-ಪಬ್ಲಿಕ್‌ ಪವರ್‌ ನ್ಯೂಸ್‌

Related Post

Leave a Reply

Your email address will not be published. Required fields are marked *