ಮಾನವೀಯತೆ ಮೆರೆದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

ಮಾನವೀಯತೆ ಮೆರೆದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

ಅನ್ನದಾತನಿಗೆ ಜೋಡಿ ಎತ್ತು! ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಮಾನವೀಯತೆ ಮತ್ತೊಮ್ಮೆ ಸಾಬೀತು

ಕಲಘಟಗಿ, ಜೂನ್‌ 26: ತಾಲ್ಲೂಕಿನ ತುಮರಿಕೊಪ್ಪದ ರೈತ ಜಂಬುಲಿಂಗ ಬಸವಣ್ಣೆಪ್ಪ ಅಂಗಡಿಗೆ ಇನ್ನು ಮುಂದೆ ಎಡೆಕುಂಟೆ ಹೊಡೆಯುವುದು ಸುಲಭ. ಇತ್ತೀಚೆಗೆ ಮಾಧ್ಯಮದಲ್ಲಿ ಇವರ ಬವಣೆ ನೋಡಿದ್ದ ಕಾರ್ಮಿಕ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಇವರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಸಚಿವರ ಈ ಕಾಳಜಿಗೆ ಅಪಾರ ಪ್ರಶಂಸೆ ವ್ಯಕ್ತವಾಗಿದ್ದು, ನೇಗಿಲ ಯೋಗಿಯ ಕಷ್ಟಕ್ಕೆ ಮಿಡಿದದ್ದಕ್ಕೆ ರೈತ ಧನ್ಯವಾದಗಳನ್ನು ಹೇಳಿದ್ದಾರೆ.

ತುಮರಿಕೊಪ್ಪದ ಜಂಬುಲಿಂಗ ಬಸವಣ್ಣೆಪ್ಪ ಅಂಗಡಿ 62 ವರ್ಷದವರು. ಇವರ ಬಳಿ ಉಳಲು ಎತ್ತುಗಳಿರಲಿಲ್ಲ. ಇಳಿವಯಸ್ಸಿನಲ್ಲಿ ತಮ್ಮ ಪತ್ನಿ ಸಂಗವ್ವ ಅಂಗಡಿ ಸಹಾಯದಿಂದ ದೈಹಿಕ ಶ್ರಮ ಬಳಸಿ ಎಡೆಕುಂಟೆ ಹೊಡೆಯುತ್ತಿದ್ದರು. ಐದಾರು ವರ್ಷಗಳಿಂದ ದಂಪತಿ ಬಹಳ ಕಷ್ಟಪಡುತ್ತಿದ್ದರು. ಇತ್ತೀಚೆಗೆ ಗೋವಿನ ಜೋಳದ ಹೊಲದಲ್ಲಿ ಇವರು ಕೈಗಳಿಂದ ಎಡೆಕುಂಟೆ ಹೊಡೆಯುತ್ತಿದ್ದುದು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ಇದನ್ನು ಕಂಡು ಮರುಗಿದ ಸಚಿವ ಸಂತೋಷ್ ಲಾಡ್ ರೂ. ೧.೫೦ ಲಕ್ಷ ಬೆಲೆ ಬಾಳುವ ಹಳ್ಳಿಕಾರ್ ತಳಿಯ ಜೋಡಿ ಎತ್ತನ್ನು ಈ ರೈತರಿಗೆ ಕೊಡಿಸಿದ್ದಾರೆ. ಕಲಘಟಗಿಯ ಜಾನುವಾರು ಸಂತೆಯಲ್ಲಿ ಎತ್ತನ್ನು ಖರೀದಿಸಿ ರೈತರ ಮನೆಗೆ ತಲುಪಿಸಿದ ಚಿತ್ರವನ್ನು ಈ ಮೇಲೆ ನೀವು ಕಾಣಬಹುದಾಗಿದೆ.

ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ರೈತ

ಸಚಿವ ಲಾಡ್‌ ಅವರು ಎತ್ತುಗಳನ್ನು ಕೊಡಿಸಿದ್ದಕ್ಕೆ ರೈತ ಜಂಬುಲಿಂಗ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ. ಬಡವನ ಕಷ್ಟ ಅರಿತ ಸಚಿವರು ನಮ್ಮ ನೋವಿಗೆ ಸ್ಪಂದಿಸಿದ್ದಾರೆ. ನಾವು ಕಷ್ಟ ಪಡುತ್ತಿದ್ದರೂ ಯಾರೂ ನೆರವಾಗಿರಲಿಲ್ಲ. ಇದೀಗ ಎತ್ತುಗಳನ್ನು ಕೊಡಿಸಿ ಕೃಷಿ ಕಾರ್ಯಕ್ಕೆ ನೆರವಾಗಿದ್ದಾರೆ. ಸಚಿವರನ್ನು ನಾವು ಜೀವ ಇರುವವರಿಗೆ ಸ್ಮರಿಸುತ್ತೇವೆ ಎಂದು ಅವರು ಹೇಳಿದ್ದಾರೆ.

Related Post

Leave a Reply

Your email address will not be published. Required fields are marked *